ಬೆಳವಳಕರ್, ಎಸ್ ಕೆ
1880-1967. ಪ್ರಸಿದ್ಧ ಸಂಸ್ಕøತ ವಿದ್ವಾಂಸರು. ಪೂರ್ಣ ಹೆಸರು ಶ್ರೀಪಾದ ಕೃಷ್ಣ ಬೆಳವಳಕರ್. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನರಸೋ ಬಾಚೀವಾಡಿ ಎಂಬ ಹಳ್ಳಿಯಲ್ಲಿ ಹುಟ್ಟಿದರು. ಕೊಲ್ಲಾಪುರದಲ್ಲಿ ಇವರ ಆರಂಭದ ವ್ಯಾಸಂಗ ನಡೆಯಿತು. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರಿಗೆ ಆಗಿನ ಪದ್ಧತಿಯಂತೆ ಹದಿನಾರನೆಯ ವಯಸ್ಸಿನಲ್ಲೇ ಏಳು ವರ್ಷದ ಕನ್ಯೆಯೊಡನೆ ವಿವಾಹವಾಯಿತು. ಅನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದ ಇವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ವಸತಿ ವಿದ್ಯಾಭ್ಯಾಸಕ್ಕೆ ಉಚಿತ ವೇತನ ಪಡೆದು 1902ರಲ್ಲಿ ಬಿ.ಎ. ಪದವೀಧರರಾದರು. ಆ ಸಂಸ್ಥೆಯ ಫೆಲೋ ಆಗಿ ಆಯ್ಕೆಗೊಂಡ ಇವರು ವಡ್ರ್ಸ್‍ವರ್ತ್ ಮತ್ತು ಶೆಲ್ಲಿ ಇವರ ಕಾವ್ಯಗಳ ತುಲನಾತ್ಮಕ ಅಧ್ಯಯನ ಎಂಬ ವಿದ್ವತ್ ಪ್ರಬಂಧವನ್ನು ಬರೆದು ಬಹುಮಾನಗÀಳಿಸಿದರು. ಮುಂದೆ 1904ರಲ್ಲಿ ಇಂಗ್ಲಿಷ್ - ಸಂಸ್ಕøತ. 1905ರಲ್ಲಿ ಇತಿಹಾಸ-ರಾಜ್ಯಶಾಸ್ತ್ರ, 1910ರಲ್ಲಿ ಗ್ರೀಕ್-ಐರೋಪ್ಯ ತತ್ತ್ವಶಾಸ್ತ್ರ-ಹೀಗೆ ಮೂರು ಎಂ.ಎ. ಪದವಿ ಪಡೆದು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಒಂದು ದಾಖಲೆ ಸ್ಥಾಪಿಸಿದರು. 1906ರಲ್ಲಿ ಉಪಾಧ್ಯಾಯ ತರಬೇತಿ ಪದವಿ ಪಡೆದ ಇವರು ಬೊಂಬಾಯಿ ಎಲ್ಛಿನ್‍ಸ್ಟನ್ ಪ್ರೌಢಶಾಲೆಯಲ್ಲಿ ಸಹಾಯಕ ಉಪಾಧ್ಯಾಯರಾಗಿ ತಮ್ಮ ವೃತ್ತಿಜೀವನ ಆರಂಭಿಸಿ ಮುಂದೆ 1908ರಲ್ಲಿ ಡೆಕ್ಕನ್ ಕಾಲೇಜಿನ ಹಸ್ತಪ್ರತಿ ಭಂಡಾರದ ಕ್ಯೂರೇಟರಾಗಿ ನೇಮಕಗೊಂಡರು. ತಮ್ಮ ವೃತ್ತಿಯ ಜೊತೆಗೆ ಸಂಶೋಧನೆ ಕೂಡ ನಡೆಸಿದ ಇವರು ಅನೇಕ ಸಂಶೋಧನಾ ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದರು. ಸಂಸ್ಕøತ ವ್ಯಾಕರಣಶಾಸ್ತ್ರ ಪದ್ಧತಿಗಳು ಎಂಬ ಪುಸ್ತಕ ಆ ಕ್ಷೇತ್ರದಲ್ಲಿ ಒಂದು ಬೆಲೆಯುಳ್ಳ ಗ್ರಂಥ. ಡೆಕ್ಕನ್ ಕಾಲೇಜಿನಲ್ಲಿ ಸಂಶೋಧನೆ ನಡೆಸುತ್ತಿದ್ದ ಜೆ.ಎಚ್.ವುಡ್ಸ್ ಎಂಬವರ ನೆರವಿನಿಂದ 1912ರಲ್ಲಿ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕೆಂದು ಹೋದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಿ.ಆರ್. ಲ್ಯಾನ್‍ಮನ್ ಅವರ ಮಾರ್ಗದರ್ಶನದಲ್ಲಿ ಭವಭೂತಿಯ ಉತ್ತರ ರಾಮಚರಿತ ನಾಟಕ ಕುರಿತು ವಿದ್ವತ್ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದರು (1914). ಮುಂದೆ ಈ ಕೃತಿ ಹಾರ್ವರ್ಡ್ ಓರಿಯಂಟಲ್ ಸೀರೀಸ್ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. 

	ಅಮೆರಿಕೆಯಿಂದ ಹಿಂತಿರುಗಿದ ಬೆಳವಳಕರರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸಂಸ್ಕøತ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅನೇಕ ವರ್ಷಗಳ ಕಾಲ ಆ ಸ್ಥಾನದಲ್ಲಿದ್ದ ಅವರು ಭಾರತೀಯ ಸಂಸ್ಕøತಿ, ತತ್ತ್ವಶಾಸ್ತ್ರ, ಸಂಸ್ಕøತ ಭಾಷೆ ಇವುಗಳ ಅಭಿವೃದ್ಧಿಗಾಗಿ ಶ್ರಮಿಸಿದರು. ವಿದ್ವಾಂಸರಾದ ಪಿ.ಡಿ. ಗುಣಿಯವರ ನೆರವಿನಿಂದ ಭಂಡಾರಕರ್ ಓರಿಯಂಟಲ್ ಸಂಶೋಧನಾ ಸಂಸ್ಥೆಯನ್ನು (1917) ಸ್ಥಾಪಿಸಿದ ಇವರು ಅದರ ಪ್ರಧಾನ ಕಾರ್ಯದರ್ಶಿಗಳಾಗಿ ಅನೇಕ ವರ್ಷಗಳ ಕಾಲ ದುಡಿದು ಅದನ್ನೊಂದು ಶ್ರೇಷ್ಠ ಸಂಶೋಧನಾ ಕೇಂದ್ರವಾಗಿ ಬೆಳೆಸಿದರು. 1897ರಷ್ಟು ಹಿಂದೆಯೇ ಯೂರೊಪಿನ ಸುಪ್ರಸಿದ್ಧ ಸಂಸ್ಕøತ ವಿದ್ವಾಂಸರೊಬ್ಬರು ಮಹಾಭಾರತದ ಸಂಶೋಧಿತ ಕೃತಿಯೊಂದನ್ನು ತರಲು ಬಹುವಾಗಿ ಪ್ರಯತ್ನ ಮಾಡ ಕೈಬಿಟ್ಟಿದ್ದರು. ಆ ಕೆಲಸವನ್ನು ಕೈಗೆತ್ತಿಕೊಂಡ ಬೆಳವಳಕರರು ವಿದ್ವಾಂಸರುಗಳಾದ ಉದ್ಗೀಕರ್ ಮತ್ತು ಸುಕ್ತಣಕರ್ ಅವರ ನೆರವಿನೊಂದಿಗೆ ಸಂಪಾದಿಸಿ ಭಂಡಾರ್‍ಕರ್ ಸಂಶೋಧನಾ ಸಂಸ್ಥೆಯ ವತಿಯಿಂದ 1925ರಲ್ಲಿ ಪ್ರಕಟಿಸಿದರು. 

	1927ರಲ್ಲಿ ಪೂನಾ ಸಂಸ್ಕøತ ಮಹಾವಿದ್ಯಾಲಯ ಸ್ಥಾಪಿಸಿದ್ದು ಇವರ ಇನ್ನೊಂದು ಸಾಧನೆ. ಭಾರತೀಯ ತತ್ತ್ವಶಾಸ್ತ್ರದ ಇತಿಹಾಸವನ್ನು ಎಂಟು ಸಂಪುಟಗಳಲ್ಲಿ ಮಹಾದೇವ ಗೋವಿಂದ ರಾನಡೆಯವರ ಸಹಭಾಗಿತ್ವದಲ್ಲಿ ಪ್ರಕಟಿಸಲು ಏರ್ಪಾಟುಮಾಡಿ ತಾವೇ ಅದರ ಎರಡನೆಯ ಸಂಪುಟವನ್ನು (ಕ್ರಿಯೇಟಿವ್ ಪೀರಿಯದ್) 1927ರಲ್ಲಿ ಪ್ರಕಟಿಸಿದರು. ಈ ಮೊದಲು 1926ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬಸುಮಲ್ಲಿಕ್ ಭಾಷನಮಾಲೆ ಎಂಬ ಅಂಕಿತದಲ್ಲಿ ವೇದಾಂತವನ್ನು ಕುರಿತ ಪ್ರೌಢ ಭಾಷಣಗಳನ್ನು ಮಾಡಿ ಅವನ್ನು ಪುಸ್ತಕ ರೂಪದಲ್ಲೂ ಪ್ರಕಟಿಸಿದರು. ಇಷ್ಟಲ್ಲದೆ ಭಾರತೀಯ ಸಾಹಿತ್ಯ ಅಕಾಡೆಮಿಯ ವತಿಯಿಂದ ಸಂಶೋಧಿತ ಅಭಿಜ್ಞಾನ ಶಾಕುಂತಲ ನಾಟಕ, ಸ್ವಂತವಾಗಿ ದಂಡಿಯ ಕಾವ್ಯಾದರ್ಶ ಮತ್ತು ಅದರ ಇಂಗ್ಲಿಷ್ ಭಾಷಾಂತರ, ಬ್ರಹ್ಮಸೂತ್ರ ಶಾರೀರಕ ಭಾಷ್ಯ ಪ್ರಕಟಿಸಿದರು. ಅನೇಕ ಅಭಿನಂದನಾ ಹಾಗೂ ಸಂಸ್ಮರಣ ಗ್ರಂಥಗಳಲ್ಲಿ ಚದರಿಹೋಗಿರುವ ಸುಮಾರು ಐವತ್ತು ವಿದ್ವತ್ ಪ್ರಬಂಧಗಳು ಇವರ ಹೆಸರಿನಲ್ಲಿವೆ.

	ಬೆಳವಳಕರ್ ಅವರಿಗೆ ಬಗೆಬಗೆಯ ಸನ್ಮಾನಗಳು, ಗೌರವ ಪ್ರಶಸ್ತಿಗಳು ಲಭಿಸಿದುವು. ಇಂಗ್ಲೆಂಡಿನ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯ ಪದವಿ. ಓರಿಯಂಟಲ್ ಸಮ್ಮೇಳನದ ವೈದಿಕ, ತತ್ತ್ವಶಾಸ್ತ್ರ ಈ ಶಾಖೆಗಳ ಅಧ್ಯಕ್ಷಪದವಿ, 1943 ರಿಂದ 1961ರ ತನಕ ಮಹಾಭಾರತ ಸಂಶೋಧನೆ ಮತ್ತು ಪ್ರಕಟನೆಯ ಪ್ರಧಾನ ಸಂಪಾದಕತ್ವ, ಕಾಶಿಯಲ್ಲಿ ನಡೆದ ಓರಿಯಂಟಲ್ ಸಮ್ಮೇಳನದ (1943) ಮಹಾ ಅಧ್ಯಕ್ಷ ಪದವಿ, 1960ರಲ್ಲಿ ಭಾರತದ ರಾಷ್ಟ್ರಾಧ್ಯಕ್ಷರಿಂದ ಪ್ರಶಂಸಾ ಪತ್ರ-ಇವು ಇವರಿಗೆ ದೊರೆತ ಪ್ರಶಸ್ತಿಗಳಲ್ಲಿ ಮುಖ್ಯವಾದುವು. 
(ಸಿ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ